ಕಿಬ್ಬನಹಳ್ಳಿ

ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿರುವ ಒಂದು ಗ್ರಾಮ ಮತ್ತು ಪ್ರಾಕ್ತನ ನೆಲೆ. ಈ ಗ್ರಾಮದ ಪರಿಸರದಲ್ಲಿ ಹಬ್ಬಿರುವ ಬಾಣಸಂದ್ರ ಬೆಟ್ಟದ ಶಾಖೆಗಳ ಬುಡದಲ್ಲಿ ಮತ್ತು ಅಲ್ಲಿಂದ ಹರಿದುಬರುವ ಝರಿಗಳ  ದಡಗಳಲ್ಲಿ ಪೂರ್ವ ಶಿಲಾಯುಗ ಮತ್ತು ಸೂಕ್ಷ್ಮ ಶಿಲಾಯುಗಗಳ ಕಾಲದ ಅನೇಕ ರೀತಿಯ ಶಿಲಾಯುಧಗಳು ದೊರಕುತ್ತವೆ. ಇಲ್ಲಿಯ ಪೂರ್ವ ಶಿಲಾಯುಗದ ಕಾಲದಲ್ಲಿ ಅಬೆವಿಲಿಯನ್ ಮತ್ತು ಅಷೂಲಿಯನ್ ರೀತಿಯ ಕೈಕೊಡಲಿಗಳು, ಸೀಳುಗೊಡಲಿಗಳು (ಕ್ಲೀವರ್), ಹೆರೆಯುವ ಆಯುಧಗಳು ಮತ್ತು ಕೊಕ್ಕು ತುದಿಯುಳ್ಳ ಆಯುಧಗಳು (ಬೀಕ್ಡ್ ಇಂಷ್ಲಿಮೆಂಟ್ಸ್) ಬಳಕೆಯಲ್ಲಿದ್ದುವು. ಉಂಡೆಕಲ್ಲುಗಳು ಮತ್ತು ಕಲ್ಲುಚಕ್ಕೆಗಳಿಂದ ಮಾಡಿದ ಎರಡು ಸಂಪ್ರದಾಯದ ಆಯುಧಗಳೂ ಇಲ್ಲಿ ದೊರಕುತ್ತವೆ. ಸೂಕ್ಷ್ಮ ಶಿಲಾಯುಗದ ಕಾಲದಲ್ಲಿ ತೆಳುಕಲ್ಲುಚಕ್ಕೆಯ, ಎರಡು ಕಡೆ ಅಲುಗುಳ್ಳ ಚಿಕ್ಕ ಚಾಕುಗಳೂ ಅರ್ಧಚಂದ್ರಾಕೃತಿಯ ಪುಟ್ಟ ಆಯುಧಗಳೂ ಬಳಕೆಯಲ್ಲಿದ್ದವು. ಅವು ಮಧ್ಯ ಪ್ಲೀಸ್ಟೋಸೀನ್ ಮತ್ತು ಅನಂತರ ಕಾಲದಲ್ಲಿ ಯೂರೋಪ್ ಮತ್ತು ಆಫ್ರಿಕಗಳಲ್ಲಿ ಪ್ರಚಲಿತವಾಗಿದ್ದ ಆಯುಧಗಳನ್ನು ಹೋಲುತ್ತವೆ. ಕರ್ಣಾಟಕದಲ್ಲಿಯೂ ಜನ ಸುಮಾರು 4, 00, 000 ವರ್ಷಗಳಷ್ಟು ಹಿಂದಿನಿಂದ ನೆಲಸಿದ್ದರೆಂದು ಊಹಿಸಲು ಇವೇ ಆಧಾರ. ಕರ್ಣಾಟಕದಲ್ಲಿ ಮಾನವನ ಪ್ರಾಚೀನತೆಯನ್ನು ಸಾಧಿಸುವ ಕೆಲವೇ ಪ್ರಾಗೈತಿಹಾಸಿಕ ನೆಲೆಗಳಲ್ಲಿ ಕಿಬ್ಬನಹಳ್ಳಿಯದೂ ಒಂದು. 

          (ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ